Sunday, October 13, 2019

ತುಣುಕು~ಮಿಣುಕು


ತುಣುಕು~ಮಿಣುಕು

ನಾನು ಕಥಾಗುಚ್ಛದ ಓದುಗರಲ್ಲಿ ಒಬ್ಬಳು. ಇವತ್ತಿನ 'ತುಣುಕು~ಮಿಣುಕು' ಬರಹ ನನ್ನಲ್ಲಿ ನಗೆ ಬುಗ್ಗೆಯನ್ನೇ ಹುಟ್ಟಿಹಾಕಿದೆ. ಪ್ರೇರಿತಳಾಗಿ ನಾನು ಬರೆದಿರುವೆ.
ನಮ್ಮ ಅಮ್ಮ ಮನೆಯಲ್ಲಿ ಚಪ್ಪರದವರೆಕಾಯಿ ಬಳ್ಳಿ ಹಬ್ಬಿಸಿದ್ದರು. ಮೊದ-ಮೊದಲು ಕಾಯಿ ಕೀಳಲು, ಹಚ್ಚಿಕೊಡಲು ಬಲು ಉತ್ಸಾಹ.. ನಾನು ನನ್ನ ತಮ್ಮ ನಾ ಮೊದಲು ನಾ ಮೊದಲು ಅಂತ ಗಲಾಟೆ ಮಾಡಿ ಕೇಳ್ತಾ ಇದ್ದ್ವಿ. ಈ ಉತ್ಸಾಹ ಬಲು ದಿನ ಇರಲಿಲ್ಲ. ಅಮ್ಮ ಮೂರು ಹೊತ್ತು ಚಪ್ಪರದವರೆಯ ಉತ್ತರ ಕರ್ನಾಟಕ ತರಹ ಪಲ್ಯ, ಕೂಟು, ಹುಳಿ, ನಾರ್ಥ್-ಇಂಡಿಯನ್ ಕರಿ ಅಂತ ತರಾವರಿ ಮಾಡ್ತಾ ಇದ್ದರು. ನಮಗೋ ಸಾಕಾಗಿ ಹೋಗಿತ್ತು. ಅಮ್ಮ ಅವತ್ತು ಸಾಯಂಕಾಲ ಅವರ ಗೆಳತಿಗೆ ಮನೆಯಲ್ಲಿ ಬೆಳೆದ ಚಪ್ಪದವರೇ ತೊಗೊಳ್ಳಿ ಅಂತ ಕೊಟ್ಟರು. ಹೊಳೀತು ನೋಡಿ ನಮಗೆ ಭಯಂಕರ ಐಡಿಯಾ! ದಿನಾ ಸಾಯಂಕಾಲ ಟೆರೇಸ್ ಮೇಲೆ ಹೋಗು ಮನೆ ಮುಂದೆ ಯಾರೇ ಸ್ವಲ್ಪ ಗುರುತಿರುವರು ಹೋಗ್ತಾ ಇದ್ದರು... ಆಂಟಿ ಹೇಗಿದ್ದೀರಾ? ಮನೆಗೆ ಬಂದು ತುಂಬಾ ದಿನ ಆಗಿದೆ. ಅಮ್ಮ ಇದ್ದಾರೆ ಬನ್ನಿ ಅಂತ ಬಲವಂತ ಮಾಡಿ ಕರೆದುಕೊಂಡು ಬರ್ತಾ ಇದ್ವಿ. ಆಮೇಲೆ ಮೇಲೆ ಬೆಳೆದ ತರಕಾರಿ ತೊಗೊಳ್ಳಿ ಅಂತ ಒಂದು ಕವರ್ ನಾವೇ ಕೊಡ್ತಾ ಇದ್ವಿ. ಅಮ್ಮನಿಗೆ ಹೀಗೂ ಮನೆಯಲ್ಲಿ ತುಂಬಾ ಇದೆಯಲ್ಲವೆ ಅಂತ ಹೇಳ್ತಾ ಇದ್ವಿ. ೨-೩ ದಿನ ಅಮ್ಮನಿಗೆ ಗೊತ್ತಾಗಲಿಲ್ಲ.. ೪ ನೇ ದಿನ ಒಟ್ಟಿಗೆ ಇಬ್ಬರಿಬ್ಬರು ಆಂಟಿನ ಕರೆದುಕೊಂಡು ಬಂದೆ. ಅವರಿಗೆ ಕೊಟ್ಟು ಕಳಿಸ್ತಾ ಇರಬೇಕಾದ್ರೆ ನಂ ತಮ್ಮ ಇನ್ನೊಬ್ಬ ಆಂಟಿನ ಕರೆದುಕೊಂಡು ಬಂಡ.. ಇವರಿಗೂ ಒಂದು ಕವರ್ ಕೊಡೆ ಅಕ್ಕ ಅಂತ ಹೇಳಿದ. ಅಷ್ಟು ಹೊತ್ತಿಗೆ ಅಮ್ಮನಿಗೆ ಗೊತ್ತಾಯಿತು. ಆಮೇಲೆ ಇತ್ತು ನಮಗೆ ಒಳ್ಳೆ ಕ್ಲಾಸ್ :-)

ಈಗಲೂ ನೆನಸಿಕೊಂಡರೆ, ಅಮ್ಮ ಮನೆಯಲ್ಲಿ ಚಪ್ಪರದವರೇ ಬೆಳೆಸಬೇಡ ಅಂತ ಹೇಳ್ತಿವಿ.

Thursday, September 26, 2019

ಮಕ್ಕಳಿಗೆ ಆಟಗಳು ಬೇಕೇ?

ಮಕ್ಕಳಿಗೆ ಆಟಗಳು ಬೇಕೇ?
====================
ಬೇಕು.. ಖಂಡಿತ ಬೇಕು ಅಂತ ಎಲ್ಲರೂ ಹೇಳ್ತಾರೆ. ವಾಸ್ತವಿಕವಾಗಿ ಮಕ್ಕಳನ್ನ ಆಡೋಕ್ಕೆ ಬಿಡ್ತೀವಾ ತಂದೆ ತಾಯಿಯರು? ಸುಮ್ಮನೆ ಒಂದಿಬ್ಬರು ತಂದೆ ತಾಯಿಯರನ್ನ ಕೇಳಿ.. ಒಬ್ಬೊಬರದು ಒಂದೊಂದು ಕಾರಣ...
ಹೊರಗಡೇ ಆಟ ಆಡೋದು ಸಾಧ್ಯವೇ ಇಲ್ಲ! ಕಾಲ ಸರಿಯಿಲ್ಲ, ವಾಹನಗಳು   ಚಲಿಸುತ್ತಿರುತ್ತದೆ, ಜನಾನ ನಂಬೋಕ್ಕೆ ಆಗೋಲ್ಲ, ಆ ಮಕ್ಕಳು ಸ್ವಲ್ಪ dull, ಈ ಮಕ್ಕಳು ತುಂಬಾ ಜೋರು, ಮಗದೊಬ್ಬರು ನನ್ ಮಗುಗೆ ಚಾನ್ಸೆ  ಕೊಡೋಲ್ಲ, ಮತ್ತೊಂದು ಮಗು ನನ್ ಮಗುನ ಸೇರಿಸಿಕೊಳ್ಳೊಲ್ಲ! ನಂಗೆ ಆಫೀಸ್ ಕೆಲಸ, ಮನೆ ಕೆಲಸನೇ ಸಾಕಾಗಿದೆ.. ಇನ್ನು ಆಟಕ್ಕೆ ಎಲ್ಲಿ ಕರೆದುಕೊಂಡು ಹೋಗೋದು? ಟೈಮೇ ಇಲ್ಲ, ನಂಗಂತೂ ಆಗಲ್ಲಪ್ಪ. ಹೀಗೆ ನೂರೆಂಟು ಕಾರಣಗಳು. ಈಗಂತೂ ಪಟ್ಟಣಗಳಲ್ಲಿ ಅಂದಾಜಿನ ಮಟ್ಟಿಗೆ ಶೇ ೬೦% ಪೋಷಕರ ಕತೆ ಇದೇ ಆಗಿರುತ್ತದೆ.

ಇನ್ನು ಮನೆ ಒಳಗಡೆ ಆಟಕ್ಕೆ ಬಿಟ್ಟರು ಅಂದ್ರೆ, ಅದು ಒಂದೇ ಆಡಬೇಕು! ಇನ್ನೊಂದು ಮಗು ಇದ್ರೆ ಸ್ವಲ್ಪ ಪರವಾಗಿಲ್ಲ. ಮಕ್ಕಳಿಗೆ ಇರುವ ಸಾಮಾನುಗಳನ್ನ ಹಂಚಿಕೊಳ್ಳಬೇಕು, ಜೋಪಾನವಾಗಿ ಉಪಯೋಗಿಸಬೇಕು ಅಂತ ಹೇಳಿಕೊಡವ ಗೋಜಿಗೆ ಹೋಗೋದಿಲ್ಲ. ಮಕ್ಕಳು ಕಿತ್ತಾಡ್ತಾರೆ ಅಂತ, ಮಕ್ಕಳಲ್ಲಿ ಗಲಾಟೆ ಬೇಡ ಅಂತ ಇಬ್ಬರಿಗೂ ಒಂದೇ ತರಹದ ಆಟದ ಸಾಮಾನು ಕೊಡುಸ್ತಾರೆ. ಮಕ್ಕಳ ಮೇಲೆ ಇದರ ಪರಿಣಾಮ ಏನು? ಅನ್ನುವ ದೂರದೃಷ್ಟಿ ಇರೋಲ್ಲ. ಅವರಿಗೆ ಆ ಕ್ಷಣದ  ಸಮಸ್ಯೆ ಪರಿಹಾರ ಆಯ್ತಲ್ಲ ಇವತ್ತಿನ ಅಳು ಗಲಾಟೆ ಮುಗೀತಲ್ಲ ಇಷ್ಟು ಸಾಕಪ್ಪ ಅನ್ನಿಸಿರುತ್ಥೆ. ಇನ್ನು ಮರುದಿನ ಶಾಲೆಗೇ ಕಳಿಸಲು ಬೇಕಾಗುವ ತಯಾರಿ, ಆಫೀಸಿಗೆ ಹೋಗುವ ಧಾವಂತ!
ಈ ಮಕ್ಕಳ ಗಲಾಟೆ ತಡೆಯೋಕ್ಕೆ ಆಗಲ್ಲ, ನಾವುಗಳು ಕೆಲಸ ಮಾಡೋದು ಹೇಗೆ ಅಂತ ಮೊಬೈಲ್ ನಲ್ಲಿ ಏನೋ ಹಾಕಿಕೊಡ್ತಾರೆ. ಒಮ್ಮೆ ಮಕ್ಕಳಿಗೆ ಮೊಬೈಲ್ ಎಂಬ ಮಾಯಾಮೃಗದ ರುಚಿ ಹತ್ತಿದರೆ ಬಿಡುವರೇ? ಅದರ ಮುಂದೆ ಪ್ರತಿಷ್ಟಾಪನೆ ಆದ್ರೆ ಮುಗಿದು ಹೋಯಿತು. ಅವರಿಗೆ ಜನರ ಸಾಮೀಪ್ಯ, ಆತ್ಮೀಯತೆ, ಮಾತು ಎಲ್ಲವೂ ಬೇಡೆನಿಸುತ್ತದೆ. ಇನ್ನೊಬರ  ಕಷ್ಟ, ಸುಖಗಳಿಗೆ ಸ್ಪಂದಿಸಲು ಮನಸಿಲ್ಲ! ಸದಾ ಮೊಬೈಲ್ ಅದರಲ್ಲಿ ಬರುವ ಕಾರ್ಟೂನ್, ವಿಡಿಯೋ, ಹಾಡು, Tik -Tok, challenge, game ಎಲ್ಲವು ಅಪ್ಯಾಯಮಾನ! ಅಲ್ಲಿ ಏನಾದರು ಆದರೆ ಅಳು, ದುಃಖ ಎಲ್ಲವು ಬರುತ್ತದೆ.  ನಿಜ ಜೀವನದಲ್ಲಿ ಬೇರೆಯವರಿಗೆ ಏನಾದರೂ ಆದ್ರೆ ಹೇಗೆ ಸ್ಪಂದಿಸಬೇಕು ಅಂತ ಗೊತ್ತಿರಲ್ಲ. ಅದು ನನ್ನದಲ್ಲ, ನಮಗಾಗಿಲ್ಲವಲ್ಲ ಅನ್ನುವ ತಟಸ್ಥ ಮನೋಭಾವ. ಈ  ಮಕ್ಕಳಿಗೆ ಏನಾದರು ಘಟನೆ, ಸಂಗತಿ, ಅನುಭವ, ಸಂತೋಷ, ದುಃಖ ಆದ್ರೆ ಹೇಗೆ ಹಂಚಿಕೊಳ್ಳಬೇಕು ಅಂತ ತಿಳಿದಿರೋಲ್ಲ. ಒಂಥರಾ ಒಂಟಿಯಾಗಿ ಬಿಡುತ್ತಾರೆ. ಸಾಮಾಜಿಕವಾಗಿ ಒಂಟಿ ಅನ್ನುವ ಭಾವನೆ. ಇದು ಮುಂದೆ ಖಿನ್ನತೆ (Depression), ಮಾನಸಿಕ ಅಸ್ವಸ್ವತೆ, ಖುಣಾತ್ಮಕ ಆಲೋಚನೆ, ಎಲ್ಲಾ ಇದ್ದರೂ ಇಲ್ಲದಿರುವದರ ಬಗ್ಗೆ ಯೋಚನೆ, ಕೀಳರಿಮೆ ಮುಂತಾದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.
ಮಕ್ಕಳಿಗೆ ಆಧುನಿಕ ಕಾಲದ ಸಾಧನಗಳನ್ನು ತೋರಿಸಿ, ಎಲ್ಲವೂ ಒಂದು ಇತಿಮಿತಿಯಲ್ಲಿ ಇದ್ದರೆ ತುಂಬಾನೇ ಒಳಿತು. ಮಕ್ಕಳ ಮನಸ್ಸು ಮತ್ತು ಮೆದಳು ಒಂದು ತರಹ ಮಣ್ಣಿನ ಮುದ್ದೆ ಇದ್ದಂತೆ, ಒಳ್ಳೇದು ಯಾವುದು, ಕೆಟ್ಟದು ಯಾವುದು? ಅಂತ ಗೊತ್ತಾಗೋ ವಯಸ್ಸು ಅಲ್ಲ. ಕುಂಭಾರ ಗಡಿಗೆಗೆ ಹದ, ಆಕಾರ ಕೊಡುವಂತೆ ನಾವು ಹಿರಿಯರು ಮಕ್ಕಳಲ್ಲಿ ಒಳ್ಳೆಯ ವಿಚಾರಗಳ ಅರಿವು, ಅಭಿರುಚಿ, ಆಲೋಚನೆ, ಚಿಂತನೆ ಮೂಡಿಸಬೇಕು.  ಲೋಕೋಭಿನ್ನ ರುಚಿ ಅನ್ನುವ ಹಾಗೆ ಒಂದೊಂದು ಮಗುವು ಅದಕ್ಕೆ ಇಷ್ಟ ಆಗುವ, ಪೂರಕವಾಗಿರುವ ವಿಷಯಗಳಲ್ಲಿ ಆಸಕ್ತಿ ಮೂಡಿಸಿಕೊಳ್ಳುತ್ತದೆ. ಜೀವನದಲ್ಲಿ ಇದು ಮಗುವಿಗೆ ಮುಂದೆ ಬರಲು, ಹೊಂದಿಕೊಂಡು ಹೋಗಲು ಸಹಾಯಕ.

ಈಗ ಕಾಲ ತುಂಬಾ ವೇಗವಾಗಿ ಓಡ್ತಾಇದೆ. ಬೇಡಾ ಅಂದ್ರು ನಮ್ಮ ಸುತ್ತಲಿನ ಪರಿಸರ, ಸಮಾಜ ನಮ್ಮನ್ನು ಓಡುವ ಹಾಗೆ ಮಾಡ್ತಾಯಿದೆ. ನಮ್ಮ ಜೊತೆಗೆ ಮಕ್ಕಳನ್ನು ಓಡಿಸ್ತಾ ಇದ್ದೀವಿ! ಮಕ್ಕಳ ಸಹಜ ಸ್ವಭಾವವಾದ ಕುತೂಹಲ, ಅನ್ವೇಷಣಾ ಮನೋಭಾವ ಎಲ್ಲವನ್ನ ಪಕ್ಕಕ್ಕೆ  ತಳ್ಳಿ ಬಿಡ್ತಾ ಇದ್ದಿವಿ. ನಮಗೆ ಗೊತ್ತಿಲ್ಲದೇ ಮಕ್ಕಳ ಮುಗ್ಧ ಸ್ವಭಾವ, ಸಾಮೀಪ್ಯ ಎಲ್ಲವನ್ನ ಕಳೆದುಕೊಳ್ಳುತ್ತಾ ಇದ್ದೀವಿ. ಮುಂದೆ ಮಕ್ಕಳು ದೊಡ್ಡವರಾದ ಮೇಲೆ ಮಕ್ಕಳು ಒಂಟಿಯಾಗಿರಲು ಇಷ್ಟ ಪಡ್ತಾರೆ, ಅವರಿಗೆ ಮೊಬೈಲ್ ಒಂದಿದ್ರೆ ಸಾಕು ಯಾರು ಬೇಡ, ಅವರ ನಿರ್ಧಾರ (Decision ) ಅವರೇ ತೊಗೊಳ್ತಾರೆ , They are quite  ಇಂಡಿಪೆಂಡೆಂಟ್ ಅಂತ ಹೆಮ್ಮೆಯಿಂದ ಹೇಳ್ತಾರೆ.  ಮುಂದೊಂದು ದಿನ ವಿಪರೀತಕ್ಕೆ ಹೋದಾಗ ಎಲ್ಲಾ ಮುಗಿದುಹೋಗಿರುತ್ತದೆ. ಬೇಕೋ ಬೇಡವೋ ಒಟ್ಟಿನಲ್ಲಿ ಈ "Mobile" ಎನ್ನುವ ಮಾಯಾಮೃಗದ ಹಿಂದೆ ಬಿದ್ದಿದ್ದೇವೆ. ತಾಯಿ, ತಂದೆಯರೂ ಆದಷ್ಟು ಬೇಗನೆ ಎಚ್ಚತ್ತು ಕೊಂಡು ಮಕ್ಕಳ ಜೊತೆ ಕಾಲ ಕಳೆದು ಒಳ್ಳೆಯ ಮೌಲ್ಯಗಳನ್ನು ಹೇಳಿಕೊಟ್ಟರೆ ಅದಕ್ಕಿಂತ ಸ್ವರ್ಗ ಬೇರಿಲ್ಲ.

ಇದಕ್ಕೆಲ್ಲ ಒಂದೇ ಮದ್ದು ಮಕ್ಕಳನ್ನ ಆಡಲು ಬಿಡಿ, ಬೇರೆಯವರ ಜೊತೆ ಬೆರೆಯಲು ಬಿಡಿ. ನೀವೇ ಗಮನಿಸಿ ಅವರ ಬೆಳವಣಿಗೆ.. ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನುವ ಹಾಗೆ ಅಲ್ಲಲ್ಲೇ ತಿದ್ದಿ. ಸ್ವಚ್ಛ ಮತ್ತು ಸ್ವಾಸ್ತ್ಯ ಸಮಾಜಕ್ಕಾಗಿ ಇಷ್ಟನ್ನು ಮಾಡಲಾರಿರಾ?

ಈಗ ಹೇಳಿ ಮಕ್ಕಳಿಗೆ ಆಟಗಳು ಬೇಕೇ? ಬೇಕೇ? 
ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ, ಭವಿಷ್ಯದ ಸಮಾಜಕ್ಕಾಗಿ, ಮುಂದಿನ ಪೀಳಿಗೆಯ ಸ್ವಾಸ್ಥ್ಯಕ್ಕಾಗಿ ಆಟಗಳು ಖಂಡಿತ ಬೇಕು!

- ತನುಶ್ರೀ ಎಸ್. ಎನ್
 ೨೬-೦೯-೨೦೧೯
 

Monday, July 22, 2019

ಚೌಕಭಾರ - ಭಾಗ ೨

ಚೌಕಭಾರ - ಭಾಗ ೨
-------------------------

ಚೌಕಭಾರ  ಬಗ್ಗೆ ಮೊದಲ ಲೇಖನ ಬರೆದಾಗ, ನನ್ನ ಪರಿಚಿತರಲ್ಲಿ ಹಲವಾರು ನೆನಪುಗಳನ್ನ ಹುಟ್ಟು ಹಾಕಿದ್ದು, ಅವರ ಸವಿ ನೆನಪುಗಳನ್ನು ಹಂಚಿಕೊಂಡಿದ್ದಕ್ಕೆ ಪ್ರೀತಿಯ ಧನ್ಯವಾದಗಳು. ಈಗ ಮುಂದಿನ ಭಾಗವನ್ನು ಬರೆದಿರುವೆ.

ನನ್ನ ಮಗಳು ಚಿಕ್ಕವಳಿದ್ದಾಗ ಹರಿಹರದ ಹರಿಹರೇಶ್ವರ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದೆವು. ದೇವಸ್ಥಾನದ ಕಟ್ಟೆ ಮೇಲೆ ಕಂಡ ಚೌಕಬಾರ ಕೆತ್ತನೆ ತೋರಿಸಿ ಸ್ಕೇಲ್ ನಿಂದ ಎಷ್ಟು ಚೆನ್ನಾಗಿ ಗೆರೆ ಎಳೆದಿದ್ದಾರೆ! ಅಲ್ವ ಅಮ್ಮ ಅಂತ.. ನಾವು ಶಾಲೆಯಲ್ಲಿ ಅಂಕೆ-ಸಂಖ್ಯೆ ಬರೆಯುವ ಪುಸ್ತಕದ ಹಾಳೆ ಇದ್ದ ಹಾಗೆ ಇದೆ ಅಂತ. ನಂತರ ಕೋಟಿಪುರದ ಕೋಟೇಶ್ವರ, ಹಾವೇರಿಯ ಸಿದ್ದೇಶ್ವರ ದೇವಸ್ಥಾನಗಳಿಗೆ ಕರೆದುಕೊಂಡು ಹೋದಾಗ ಅಮ್ಮ ಇಲ್ಲೂ ಅದೇ ಥರ ಇದೆಯಲ್ಲಾ ಎಂದು ತುಂಬಾ ಆಶ್ಚರ್ಯ ಪಟ್ಟಳು. ಅಮ್ಮ, ನಾವು ನೋಡಿರುವ ದೇವಸ್ಥಾನಗಳಲ್ಲಿ ಈ ಥರ ಗೆರೆಗಳು, ಚೌಕಗಳಿವೆ. ಯಾಕೆ? ಏನು ಮಾಡುತಿದ್ದರು? ಮಗಳಿಗೆ ಅದು ಚೌಕಬಾರ ಆಟ, "ನಿನ್ನ ಹಾವು-ಏಣಿ" ಆಟದ ಥರ ಮನೆ ಆಟ(Board  game ). ಹೇಗೇ ಆಟ ಆಡುತ್ತಾರೆ, ಕವಡೆ ಅಂದ್ರೆ ಏನು? ಅಂತ ಒಂದೇ ಸಮನೆ ಪ್ರಶ್ನೆಗಳು?  ಇದು ನಮ್ಮ ದೇಶದ ತುಂಬಾ ಹಳೆಯ ಆಟ ಅಂತ ಹೇಳಿದ್ರೆ... ಅಜ್ಜಿಗೂ ಗೊತ್ತ? ತಾತು,ಪೆರಿಗೂ ಗೊತ್ತ? ಅವರಜ್ಜಿ,ತಾತಗೂ ಗೊತ್ತ? ಎಲ್ಲ ಅಜ್ಜಿ ತಾತಗೂ ಗೊತ್ತ? ಆಗಲೇ ಕವಡೆಗಳು ಇತ್ತಾ? ಅಂತ ನೂರೆಂಟು ಪ್ರಶ್ನೆಗಳು. ಕವಡೆನ Dice ರೀತಿ ಬಳಸುತ್ತೇವೆ. ಕವಡೆ ಅಂದ್ರೆ ಕಪ್ಪೆ ಚಿಪ್ಪು ತರ ಇರುತ್ತೆ ಅಂದ್ರೆ, ಎಲ್ಲರು ಸಮುದ್ರಕ್ಕೆ ಹೋಗಿ ತಂದಿದ್ರ? ಅದನ್ನ ಗೊಂಬೆಗಳ ತರ ಫ್ಯಾಕ್ಟರಿಯಲ್ಲಿ ಮಾಡೋಕ್ಕೆ ಆಗಲ್ಲವಾ? ಅಂತ ಮತ್ತೊಂದಿಷ್ಟು ಪ್ರಶ್ನೆಗಳು. ಕವಡೆ ಸಿಗದೇ ಇದ್ದರೇ! ಅಂತ ಮಗದೊಂದು ಪ್ರಶ್ನೆ... ಆಗ ಹುಣಸೆ ಬೀಜನ ಉರುಟು ನೆಲದ ಮೇಲೆ ಉಜ್ಜಿ ಉಜ್ಜಿ ಒಂದು ಕಡೆ ಬಿಳಿ ಮಾಡ್ತಾ ಇದ್ದ್ವಿ. ಅದನ್ನ ಕವಡೆ ತರ ಉಪಯೋಗಿಸುತ್ತ ಇದ್ವಿ ಅಂತ ಹೇಳಿದೆ. ಕಾಯಿಗಳಿಗೆ ಏನು ಮಾಡ್ತಾ ಇದ್ರಿ ಅಂದಾಗ ಶೇಂಗಾ ಬೀಜ, ಹುರುಗಡಲೆ ಅಂತ ಹೇಳಿದೆ. ಯಾಕೆ! ಅಂತ ಕೇಳಿದ್ರೆ ಆಟ ಆದ ಮೇಲೆ ತಿನ್ನೋಕ್ಕೆ ಅಂತ ಅಂದೇ ;-)  ೫ ಮನೆ ಯಾಕೆ ಅಂತ ಕೇಳಿದ್ರೆ, ನಂ ತಲೆ ಕೆರೆದುಕೊಂಡೆ.. ಛೆ! ಈ ಆಟ ಚಿಕ್ಕವಳಾಗಿದ್ದಾಗಿಂದ ಆಡ್ತಾ ಇದ್ರೂ ನಂಗೆ ಏನು ಗೊತ್ತಿಲ್ಲವಲ್ಲ ಅಂತ ಅನಿಸಿತು.

ಆವಾಗಿನಿಂದಲೇ ಈ ದೇಶಿಯ ಆಟಗಳ ಕುರಿತು 'ಗುಂಗಿ ಹುಳ' ನನ್ನ ತಲೆಯಲ್ಲಿ ಬಂದಿದ್ದು. ನನ್ನ ಮಗಳಿಗೆ ಈ ಆಟವನ್ನು ಹೇಳಿಕೊಡಬೇಕು. ನನ್ನ ಮಗಳಿಗೆ ಅಷ್ಟೇ ಅಲ್ಲ ಬೇರೆ ಮಕ್ಕಳಿಗೂ ಕೂಡ ನಾವು ಬಾಲ್ಯದಲ್ಲಿ ಆಡಿದ ಆಟಗಳನ್ನು ಹೇಳಿಕೊಡಬೇಕು ಅಂತ ಅನ್ನಿಸಿದ್ದು. ನಾನು ನನ್ನ ಕನಸಿನ ಲೋಕದಲ್ಲಿ ಮುಳುಗಿರುವಾಗ, ಅಮ್ಮ, ನಂಗೆ ಯಾವಾಗ ಆಟ ಹೇಳಿಕೊಡ್ತೀಯಾ ಅಂತ ಕೇಳಿದಳು. ಖಂಡಿತವಾಗಿಯೂ, ಮುಂದಿನ ರಜೆಯಲ್ಲಿ ಹೇಳಿಕೊಡ್ತೀನಿ ಅಂತ ಹೇಳಿದ್ದೆ. ಅದರಂತೆ, ಈ ಬಾರಿಯ ಬೇಸಿಗೆಯಲ್ಲಿ ಅವಳಿಗೆ ಚೌಕಾಬಾರದಲ್ಲಿ ತುಸು ಆಸಕ್ತಿ ಹುಟ್ಟಿಸಿರುವೆ.  

- ಎಸ್ ಎನ್ ತನುಶ್ರೀ
 ೨೨/೦೭/೨೦೧೯

Wednesday, July 03, 2019

ಚೌಕಭಾರ

ಚೌಕಭಾರ

ಈ ಸಲ ಬೇಸಿಗೆ ರಜೆಯಲ್ಲಿ ನನ್ನ ಮಗಳಿಗೆ ತುಂಬಾ ಬೇಜಾರೂ. ಹೊರಗಡೆ ತುಂಬಾ ಬಿಸಿಲು ಆಡೋಕ್ಕೆ ಆಗೋಲ್ಲ. ಮನೆಯಲ್ಲಿ ಬೇರೆ ಏನಾದ್ರು ಚಟುವಟಿಕೆ ಮಾಡೋಣ ಅಂದ್ರೆ ಅದೂ ಬೇಜಾರು. ನಾವು ಚಿಕ್ಕವರಿದ್ದಾಗ ಏನು ಮಾಡ್ತಾಇದ್ವಿ ಅಂತಾ ಯೋಚನೆ ಮಾಡಿದಾಗ, ಬಾಲ್ಯದ ಸವಿನೆನಪುಗಳ ಫ್ಲಾಶ್ ಬ್ಯಾಕ್... ಮುಖದಲ್ಲಿ ಒಂದು ಮುಗುಳ್ನಗೆ, ಮನಸ್ಸು ಉಲ್ಲಸಿತ. ಏನಪ್ಪಾ  ಅಂಥಾದ್ದು ಅಂತ ಯೋಚನೆ ಮಾಡ್ತಾ ಇದ್ದೀರಾ? ಅದುವೇ ಚೌಕಭಾರ. ಅವಳಿಗೆ ಚೌಕಭಾರ ಹೇಳಿಕೊಡೊಕ್ಕೆ ಒಳ್ಳೆ ಸಮಯ ಅಂತ ಕಾರ್ಯರೂಪಕ್ಕೆ ಇಳಿಸಿದೆ.

ನಮ್ಮ ಮನೆಯಲ್ಲಿ ಎಲ್ಲರೂ ಅಂದ್ರೆ ಅಕ್ಷರಶ: ಎಲ್ಲರೂ ಚೌಕಭಾರ ಪ್ರಿಯರೇ. ಕವಡೆಗಳು ಯಾವಾಗಲು ಇದ್ದೇ ಇರುತ್ತೆ. ಶುರುವಾಯಿತು ನಮ್ಮ ಹುಡುಕಾಟ. ಒಂದು ಮಣೆ ಮೇಲೆ ಸೀಮೆಸುಣ್ಣದಿಂದ ೫-ಮನೆ ಚೌಕಭಾರ ಚಿತ್ರ ಬರೆದಿದ್ದು ಆಯಿತು. ಮಗಳನ್ನು ಸೇರಿಸಿಕೊಂಡು ಅಡುಗೆ ಮನೆಗೆ ನುಗ್ಗಿದ್ದಾಯಿತು.. ಅಡುಗೆಮನೆ ಯಾಕೆ ಅಂತೀರಾ? ಬೇಕಲ್ಲ ಆಡೋಕ್ಕೆ ಕಾಯಿಗಳು. ೪- ಹುಣಸೆ ಬೀಜ, ೪-ಪಿಸ್ತಾ ಸುಲಿದ ಸಿಪ್ಪೆ , ೪-ಅಡಿಕೆ ಚೂರುಗಳು. ಇನ್ನೊಂದು ಕಾಯಿಗೆ ಏನು ಮಾಡುವುದು? ಶೇಂಗಾ ಬೀಜ, ಹುರುಗಡಲೆ ಕಾಳುಗಳು ಆಗೋಲ್ಲ, ಯಾಕಂದ್ರೆ ನನ್ ಮಗ ಗುಳುಕಾಯ ಸ್ವಾಹಾ ಮಾಡ್ತಾನೆ. ಅಡುಗೆ ಮನೆ ಬಿಟ್ಟು ಅಮ್ಮನ ಹೊಲಿಗೆ ಡಬ್ಬಕ್ಕೆ ಕೈ ಹಾಕಿ ೪-ಗುಂಡಿಗಳನ್ನು ಕಾಯಿಗಳಾಗಿ ಮಾಡಿದ್ದ್ವಿ .

ಅಕ್ಕ-ಪಕ್ಕದ ಮನೆ ಹುಡುಗರನ್ನ ಬನ್ರೋ ಚೌಕಭಾರ ಆಡೋಣ ಅಂತ ಕರೆದಿದ್ದು ಆಯ್ತು. ಆಟದ ನಿಯಮಗಳನ್ನು ಹೇಳ್ತೀನಿ ಕೇಳ್ರೋ ಅಂದ್ರೆ, ಆಂಟಿ ಆಟ ಆಡ್ತಾ ಹೇಳಿಕೊಡಿ ಅಂತಾರೆ. 'ಇಟ್ ಮನೆ ಚಟ್', 'ಮುಟ್ಟಿದ ಮನೆ ಚಟ್', 'ಇಟ್ಟಿದ್ ಕಾಯ್ ಚಟ್', 'ಮುಟ್ಟಿದ್ ಕಾಯ್ ಚಟ್', 'ಮೂರು ನಾಲ್ಕು ಶ್ಯಾಮ್', 'ಮೂರು ಎಂಟು ಶ್ಯಾಮ್ ', 'ಗಟ್ಟಿ ', 'ಜೋಡಿ ಗಟ್ಟಿ ', 'ಟೊಳ್ಳು ಗಟ್ಟಿ ', 'ಸೀ ಕಾಯ್' ಕೊಡುವುದು ಮುಂತಾದವು ಹೇಳಿದೆ. ಅಂತೂ ಇಂತೂ ಆಟ  ಶುರುವಾಯಿತು. ಶುರುವಿನಿಂದಲೇ ಮಜಾ ಮಜಾ, ದೇವರಿಗೆ, ದಿಂಡರಿಗೆ, ನಮಗೆ ಅಂತ ಹೇಳಿ ಕವಡೆ ಹಾಕುವುದು. ಅಪ್ಪಿ ತಪ್ಪಿ ನಾಲ್ಕೋ, ಎಂಟೋ ಬಿದ್ದರೆ ನಮಗೆ ಅಂತ ಹೇಳೋದು, ಅಥವಾ ಮೂರು ಬಿದ್ದಿದ್ರೆ ನಾಲ್ಕು, ಒಂದು ಬಿದ್ದಿದ್ರೆ ಎಂಟು ಅಂತ ದಾರಿ ತಪ್ಪಿಸೋದ್ ಪ್ರಯತ್ನ ನಡಿತಾ ಇರುತ್ತೆ. ಇನ್ನೇನು ನಮಗೆ ಒಂದೇ ಒಂದ್ ಬಿದ್ರೆ ಆಟ ಮುಗಿಯುತ್ತೆ ಅಂತ ಇದ್ರೆ, ಸಾಲು ಸಾಲಾಗಿ ನಾಲ್ಕು ಎಂಟು ಬೀಳ್ತಾ ಇರುತ್ತೆ. ನಮ್ಮ ಚಡಪಡಿಕೇನು ಏರತಾ ಇರುತ್ತೆ. ಆಡೋಕ್ಕೆ ಶುರುಮಾಡಿ ೨ ಘಂಟೆಯಾದ್ರು ಮುಗಿದಿಲ್ಲ. ಎಲ್ಲರ ಮುಖದಲ್ಲೂ ಒಂಥರ ಉತ್ಸಾಹ, ಕಾತುರ. ಎಲ್ಲರಲ್ಲೂ, ಕಾಯಿಗಳನ್ನ ಹೊಡಿಬೇಕು, ನನ್ನ ಕಾಯಿಗಳನ್ನ ಹಣ್ಣು ಮಾಡಬೇಕು.. ಹೇಗೆ ಕಾಯಿಗಳನ್ನ ನೆಡಸಬೇಕು ಅನ್ನೋ ಲೆಕ್ಕಾಚಾರ. ಆಟ ಮುಗಿದಾಗ ಎಲ್ಲರ ಮೈ ಮನಸ್ಸು ಹಗುರ.. ಮತ್ತೊಮ್ಮೆ ಆಡೋಕ್ಕೂ ತಯಾರ್ !

ನಿಮ್ಮ ಹತ್ತಿರ ವಿಶಿಷ್ಟ/ವಿಶೇಷ ವಾದ ಚೌಕಭಾರ ಅನುಭವ ಇದ್ದರೆ ಹಂಚಿಕೊಳ್ಳಿ.